ರಬೀಇನ ಸತ್ಕಾರ
ರಬಿಉಲ್ ಅವ್ವಲ್ 12 ರ ಮುಂಜಾನೆ ಮಅದಿನ್ ಗ್ರ್ಯಾಂಡ್ ಮಸ್ಜಿದ್ ನಲ್ಲಿ ನಡೆದ ಮೌಲಿದ್ ಮಜ್ಲಿಸ್ ನಲ್ಲಿ ಭಾಗವಹಿಸಿ ಊರಿಗೆ ಹೊರಟೆ. ಬರುವ ದಾರಿಯಲ್ಲಿ ಕಾಞಂಗಾಡಿನ ಚಿತ್ತಾರಿ ಎಂಬಲ್ಲಿ ರಸ್ತೆ ಬದಿಯಲ್ಲಿ ಒಂದು ಪುಟ್ಟ ಟೆಂಟ್ ಹಾಕಿ ಜೂಸ್ ಕೊಡುವುದನ್ನು ಕಂಡು ಗಾಡಿ ನಿಲ್ಲಿಸಿದೆವು. ಗಾಡಿ ನಿಲ್ಲಿಸಿದ ಕೂಡಲೇ ಒಬ್ಬರು ನಮ್ಮ ಬಳಿ ಬಂದು "ಉಸ್ತಾದೇ...ಎಲ್ಲಿಗೆ ಹೊರಟಿದ್ದು ? ಊಟ ಮಾಡಿದ್ದೀರಾ ?" ಎಂದು ಕೇಳಿದರು. ಜುಮಾ ಕಳೆದು ಮುಂದೆ ಸಿಗುವ ಹೋಟೆಲಿನಲ್ಲಿ ಊಟ ಮಾಡಬೇಕೆಂದು ಪ್ಲಾನ್ ಹಾಕಿದ ನಮಗೆ ಆ ಪ್ರಶ್ನೆ ಕೇಳಿ ತುಂಬಾ ಸಂತೋಷವಾಯಿತು. ಚಿತ್ತಾರಿ ಮಸೀದಿಯ ಎದುರುಗಡೆ ಇರುವ ಮನೆಗೆ ನಮ್ಮನ್ನು ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಕೊಟ್ಟರು. ಊಟ ಮಾಡಿದ ನಂತರ ನಾವು ಮನೆಯೊಡೆಯನ ಬಳಿ ಹೋಗಿ "ಯಾ ಅಕ್ರಮ ಬೈತ್" ಹಾಡಿ ದುಆ ಮಾಡಿ ಮರಳುವ ವೇಳೆಯಲ್ಲಿ ಆ ವ್ಯಕ್ತಿ ತುಂಬಾ ವಿಷಯ ಹೇಳಿದರು. ಅನೇಕ ವರ್ಷಗಳಿಂದ ಪ್ರತೀ ವರ್ಷ ರಬಿಉಲ್ ಅವ್ವಲ್ 12 ರಂದು ಊರಿನ ಜನರಿಗೆ ಊಟ ಕೊಡುತ್ತಿದ್ದಾರೆ ಅವರು. ಸುಲ್ತಾನುಲ್ ಉಲಮಾ ಮತ್ತು ಬದ್ರುಸ್ಸಾದಾತ್ ತಙಳರಂತಹ ಮಹಾ ವ್ಯಕ್ತಿಗಳು ಆ ಭಾಗಕ್ಕೆ ಬಂದರೆ ಇವರ ಮನೆಯಲ್ಲಿ ಆಹಾರ ಮತ್ತು ರೂಮಿನ ವ್ಯವಸ್ಥೆ ಮಾಡಿ ಕೊಡುವುದಂತೆ. ಇನ್ನೂ ಅನೇಕ ವರ್ಷ ಹೀಗೆ ಕೊಡಲು ಆಸೆ ಇದೆ, ದುಆ ಮಾಡಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು.
ಅಲ್ಲಿಂದ ಹೊರಡುವಾಗ ಮೊದಲು ಕಂಡ ಜೂಸ್ ಟೆಂಟಿನ ಬಳಿ ಹೋದೆವು. ಅಲ್ಲಿ 3 - 4 ಜೂಸ್ ಮಿಶನ್ ಇಟ್ಟು ಮೂವರು ಅನಾನಸ್, ಪುದೀನಾ, ಕಲ್ಲಂಗಡಿ ಜೂಸ್ ಮಾಡುತ್ತಿದ್ದರು. ರಸ್ತೆಯಲ್ಲಿ ಹೋಗುವ ಎಲ್ಲರಿಗೂ ಎಷ್ಟು ಬೇಕಾದರೂ ಕುಡಿಯಬಹುದು ಎಂಬ ರೀತಿಯಲ್ಲಿ ಮೇಲೆ ಬೋರ್ಡ್ ನಲ್ಲಿ "24hrs unlimited juice" ಎಂದು ಬರೆದಿದ್ದರು. ನಾವು ಹೋದಾಗ ನಮ್ಮನ್ನು ಅಲ್ಲಿ ಕೂರಿಸಿ ಒಬ್ಬರು ಜೂಸ್ ಕೊಟ್ಟರು. "ಎಷ್ಟು ಬೇಕಾದರೂ ಕುಡಿಯಿರಿ ಉಸ್ತಾ, ಇದು ನಬಿ ﷺ ರ ಹೆಸರಲ್ಲಿ ನಾವು ಪ್ರತೀ ರಬಿಉಲ್ ಅವ್ವಲ್ 12 ರಂದು ಕೊಡುವುದು. ದಾರಿಯಲ್ಲಿ ಹೋಗುವ ಯಾರಿಗೂ ಎಷ್ಟು ಬೇಕಾದರೂ ಕುಡಿಯಬಹುದು" ಎಂದು ಹೇಳಿ ಸಂತೋಷ ಮುಖದಿಂದ ನಮ್ಮನ್ನು ನೋಡದರು.
ಇದು ಒಂದು ಗ್ರಾಮದಲ್ಲಿ ನಡೆಯುವುದು. ಹೀಗೆ ಹಲವು ಗ್ರಾಮಗಳಲ್ಲಿ ಪ್ರವಾದಿ ﷺ ರ ಜನ್ಮ ದಿನದಂದು ಅನೇಕಾನೇಕ ಸತ್ಕರ್ಮಗಳು ನಡೆಯುತ್ತಿದೆ. ಇದು ಜನರ ಮೆಚ್ಚುಗೆ ಪಡೆಯಲು ಅಥವಾ ಬೇರೆ ದುರುದ್ದೇಶದಿಂದ ಮಾಡುವುದು ಅಲ್ಲ, ಹೊರೆತು, ಪ್ರವಾದಿ ﷺ ರ ಮೇಲಿರುವ ಪ್ರೀತಿಯನ್ನು ತೋರಿಸುವುದು. ಅಲ್ಲಾಹು ಸ್ವೀಕರಿಸಲು ಆಮೀನ್.
ಇನ್ನೂ ಅನೇಕ ವರ್ಷ ಹೀಗೆ ದಾನ ಧರ್ಮ ಮಾಡಲು ಅಲ್ಲಾಹು ತೌಫೀಖ್ ನೀಡಲಿ ಆಮೀನ್ ಯಾ ರಬ್ಬಲ್ ಆಮೀನ್.
✒️ ಹಾಫಿಝ್ ಸಿನಾನ್ ಕಬಕ
05 - 09 - 25

Comments
Post a Comment