ವೃದ್ಧಾಶ್ರಮದಲ್ಲಿ ಒಂದು ಸಂಜೆ



 ನಮ್ಮ ಅಜ್ಜ ಅಜ್ಜಿಯಂದಿರ ಪ್ರಾಯವಿರುವ ಕೆಲವು ಅಜ್ಜಂದಿರು. ಎಲ್ಲರ ಮುಖದಲ್ಲೂ ಏನೋ ಒಂದು ನಷ್ಟವಾದ ಭಾವನೆ. ಮನಸ್ಸಲ್ಲಿ ಏನೋ ಒಂದು ಬಚ್ಚಿಟ್ಟು ಅನಿವಾರ್ಯ ಮುಗುಳ್ನಗೆಯನ್ನು ಬೀರುವ ಪ್ರಸನ್ನ ಮುಖ.

ಅಜ್ಮೀರ್ ಖ್ವಾಜಾ (ರ) ರ ಹೆಸರಲ್ಲಿ ಕೆಲವು ಹಣ್ಣು ಹಂಪಲುಗಳ ಕಿಟ್ಟ್ ವಿತರಣೆ ಮಾಡಿ ಕೊನೆಗೆ 15ರಷ್ಟು ಕಿಟ್ ಗಳು ಬಾಕಿಯಾದಾಗ ಜಾಬಿರ್ ಸಖಾಫಿ ಉಸ್ತಾದರ ನಿರ್ದೇಶ ಪ್ರಕಾರ ನಾವು ವೃದ್ಧಾಶ್ರಮಕ್ಕೆ ತೆರಳಿದೆವು. ನಾವು ಅಲ್ಲಿಗೆ ತಲುಪಿದಾಗ ಒಂದು ಚಿಕ್ಕ ಮನೆ. ಮನೆಯ ಮುಂದೆಯಿರುವ ಬೀದಿಯ ಬಳಿ ಕುಳಿತು ಒಬ್ಬ ತಾತ ಬೀಡಿ ಸೇದುತ್ತಾ ಕುಳಿತಿದ್ದರು. ಅವರ ಪಕ್ಕದಲ್ಲೇ ವೃದ್ಧಾಶ್ರಮದ ಬೋರ್ಡ್ ಇತ್ತು. ಆ ಚಿಕ್ಕ ಮನೆಯ ಎದುರುಗಡೆ ನಾವು ಗಾಡಿ ನಿಲ್ಲಿಸಿದಾಗ ಆ ಮನೆಯ ಸಿಟೌಟ್ ನಲ್ಲಿ ಕುಳಿತಿದ್ದ ಅಜ್ಜಂಡಿರು ನಮ್ಮನ್ನು ಸ್ವೀಕರಿಸುವ ಮಟ್ಟಿನಲ್ಲಿ ಎದ್ದು ನಿಂತರು. 



ನಗುಮುಖದಿಂದ ಬಂದು ಕೈಕೊಟ್ಟು  ಸ್ವೀಕರಿಸಿದರು. ಬೆಂಚ್ ಸರಿ ಮಾಡಿ ಕೂರಲು ಹೇಳಿದರು. ಆಗಲೇ ಒಳಗಿನಿಂದ ಒಬ್ಬರು ಮಹಿಳೆ ಬಂದು ಕುಡಿಯಲು ಕುಡಿಯಲು ಚಾ ಹಾಕಲೇ ಎಂದು ಕೇಳಿದಾಗ "ಬೇಡ, ನಾವು ಈಗಷ್ಟೇ ಕುಡಿದು ಬಂದದ್ದು" ಎಂದು ಹೇಳಿ ಅವರನ್ನು ತಡೆದೆವು. 

ಜೀವನದಲ್ಲೇ ಮೊದಲ ಬಾರಿ ವೃದ್ಧಾಶ್ರಮ ಸಂದರ್ಶಿಸಿದ ಕಾರಣ ಅವರಲ್ಲಿ ಏನೇನು ಮಾತನಾಡಬೇಕು ಎಂದು ಐಡಿಯಾ ಇರಲಿಲ್ಲ. ಅವರಲ್ಲಿದ್ದ ಒಬ್ಬರು ಲಕ್ಷ್ಮಾನಂದ ಎಂಬ ಸ್ವಾಮಿ ನಮಗೆ ಅವರು ವಾಸಿಸುವ ಕೊಠಡಿಗಳನ್ನು ತೋರಿಸಿ ಕೊಟ್ಟರು. ನಮ್ಮ ಹಾಸ್ಟೆಲಿನ ಅದೇ ರೀತಿಯಲ್ಲಿರುವ ಕೊಠಡಿಗಳು. ಅವರವರು ಮಲಗುವ ಜಾಗದಲ್ಲಿ ಅವರ ವಸ್ತ್ರ ಉಪಕರಣಗಳೂ ಇದ್ದವು. ಅಲ್ಲಿಯ ಕುರಿತು ಮತ್ತು ಅಲ್ಲಿದ್ದ ವೃದ್ಧರ ಕುರಿತು ಒಂದೊಂದು ಕೇಳಿ ತಿಳಿಯಲು ಆರಂಭಿಸಿದೆ. ಆ ಸ್ವಾಮಿ ಅವರ ಕುರಿತು ಹೇಳಲು ಆರಂಭಿಸಿದರು.

 "20 ವರ್ಷಗಳ ಮುಂಚೆ ಮನೆ ಬಿಟ್ಟು ಉತ್ತರಾಖಂಡ್ ಗೆ ತೆರಳಿ ಅಲ್ಲಿ ಸನ್ಯಾಸಿ ಜೀವನಕ್ಕೆ ಕಾಲಿಟ್ಟೆ. ಹಿಮಾಲಯ ಪ್ರಾಂತ್ಯದಲ್ಲಿರುವ ವಿವಿಧ ದೇವಾಲಯಗಳಿಗೆ ಹೋಗಿ ಅಲ್ಲಿ ಜೀವನ ದೂಡುತ್ತಿದೆ. ಅದರೆಡೆಯಲ್ಲಿ ಎರಡು ಬಾರಿ ಅಜ್ಮೀರಿಗೂ ಹೋಗಿದ್ದೆ." ಅಜ್ಮೀರಿಗೆ ಹೋಗಿದ್ದೆ ಎಂದು ಎಂದು ಹೇಳಿದಾಗ ನಾನು ಅದ್ಭುತಗೊಂಡು "ಅಜ್ಮೀರಿಗೂ ಹೋಗಿದ್ದೀರಾ ಮಾಶಾ ಅಲ್ಲಾಹ್" ಎಂದು ಹೇಳಿದೆ. "ಅಜ್ಮೀರಿನಲ್ಲಿರುವ ಕಾಲ ತುಂಬಾ ಸಂತೋಷಕರವಾಗಿತ್ತು. ಎಲ್ಲಾ ಧರ್ಮದವರು ಖ್ವಾಜಾರ ಬಳಿ ಬಂದು ಆಶೀರ್ವಾದ ಪಡೆಯುತ್ತಿದ್ದರು. ನಂತರ ನಾನು ಕೇರಳದಲ್ಲಿ ಬೀದಿ ಬೀದಿ ಅಲೆದಾಡುತ್ತಿರುವಾಗ ಯಾರೋ ಬಂದು ನನನ್ನು ಇಲ್ಲಿಗೆ ತಲುಪಿಸಿದರು. ಇಲ್ಲಿ ಇವರ ಜೊತೆ ನಾನು ಸಂತೋಷವಾಗಿದ್ದೇನೆ." ಎಂದು ಹೇಳಿ ನಿಟ್ಟುಸಿರು ಬಿಟ್ಟರು. "ನಿಮಗೆ ಈಗ ಮನೆಗೆ ಮರಳಬಹುದಲ್ಲವೇ ?" ಎಂದು ಕೇಳಿದಾಗ "ಹೇಯ್... ಈಗ ಹೋದರೆ ಮನೆಯವರಿಗೆ ಕಷ್ಟವಲ್ಲವೇ ???" ಎಂದು ಹೇಳಿ ಕೆಳಗೆ ನೋಡಿದರು. 

ಮತ್ತೊಮ್ಮೆ ಆ ಹೆಂಗಸು "ಚಾ ಹಾಕಲೇ " ಎಂದು ಕೇಳಿದಾಗ ನಾವು "ಬೇಡ ಬಿಡಿ...ಇವರ ಜೊತೆ ಮಾತನಾಡಿದಾಗಲೇ ನಮ್ಮ ಹೊಟ್ಟೆ ತುಂಬಿತು" ಎಂದು ನಮ್ಮಲ್ಲೊಬ್ಬ ಹೇಳಿದ. ಹಿಂಬದಿಯಲ್ಲಿರುವ ನದೀತೀರಕ್ಕೆ ಹೋಗಿ ನೋಡುವಾಗ ಸೂರ್ಯ "ಟಾಟಾ" ಹೇಳಿ ಹೊರಡಲು ತಯಾರಾಗಿದ್ದ. ಅಲ್ಲೇ ಪಕ್ಕದಲ್ಲಿ ಒಂದು ಗಿಳಿ ತನ್ನ ಪಂಜರದಲ್ಲಿ ಅದರ ಭಾಷೆಯಲ್ಲಿ ಏನೋ ಕೂಗಿ ಹೇಳುತ್ತಿತ್ತು. 

ಮಗ್ರಿಬ್ ಗೆ ಹೊತ್ತಾದ ಕಾರಣ ಬೇಗನೇ ಹೊರಡಬೇಕಿತ್ತು. ಅಲ್ಲಿದ್ದ 10-15 ಮಂದಿ ಅಜ್ಜಂದಿರಿಗೆ ನಮ್ಮ ಬಳಿಯಿದ್ದ ಫ್ರೂಟ್ಸ್ ಕಿಟ್ ಕೊಟ್ಟು ಹೊರಡಲು ನಿಂತಾಗ... ಅವರಲ್ಲೋರ್ವರು "ಇಲ್ಲಿಗೆ ಬರುತ್ತಾ ಇರಿ..."ಎಂದು ಹೇಳಿದರು. 

ಗಾಡಿಯಲ್ಲಿ ಮರಳುವಾಗ ಯಾರಿಗೂ ಮಾತೇ ಬರುತ್ತಿರಲಿಲ್ಲ...ಎಲ್ಲರೂ ಮೌನಿಯಾಗಿ ಆ ಸ್ನೇಹ ಆಶ್ರಮದ ಚಿಂತೆಯಲ್ಲೇ ಇದ್ದರು. ಅವರೊಂದಿಗೆ ತೆಗೆದ ಫೋಟೋ ನೋಡುತ್ತಾ ಮನಸ್ಸು ಹೇಳಿತು..."ಪಾಪ ಅಜ್ಜಂದಿರು..."

✒️ ಹಾಫಿಝ್ ಸಿನಾನ್ ಕಬಕ

     19 - 01 - 2024

    @Vellap near Trikaripur 

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ