ಪ್ರವಾದಿ ಸೌಂದರ್ಯ
ಅಲ್ಲಾಹನು ಈ ಲೋಕದಲ್ಲಿರುವ ಮನುಷ್ಯರಿಗೆ ನೀಡಿದ ಸೌಂದರ್ಯದ ದುಪ್ಪಟ್ಟು ಸೌಂದರ್ಯವನ್ನು ಪ್ರವಾದಿ ﷺ ರಿಗೆ ನೀಡಿದ್ದಾನೆ. ಈ ಲೋಕದ ಮೊತ್ತ ಸೌಂದರ್ಯವನ್ನು ಒಂದು ವೃತ್ತವಾಗಿ ತೆಗೆದುಕೊಂಡರೆ, ಅದರ ನಾಲ್ಕರ ಒಂದು ಭಾಗವನ್ನು ಈ ಲೋಕದಲ್ಲಿರುವ ಎಲ್ಲಾ ಮನುಷ್ಯರಿಗೆ ನೀಡಿದ. ಆ ನಾಲ್ಕನೇ ಒಂದು ಭಾಗ ಸೌಂದರ್ಯದಲ್ಲಿ ಆದ್ಯಪಿತ ಆದಂ ನಬಿ (ಅ) ರಿಂದ ಅಂತ್ಯ ದಿನದವರೆಗೆ ಬರುವ ಮನುಷ್ಯರ ಸೌಂದರ್ಯ ಒಳಪಟ್ಟಿದೆ. ಮತ್ತೊಂದು ನಾಲ್ಕನೇ ಒಂದು ಭಾಗ ಸೌಂದರ್ಯವನ್ನು ಅಲ್ಲಾಹನು ಯೂಸುಫ್ ನಬಿ (ಅ) ರಿಗೆ ನೀಡಿದ. ಆ ಸೌಂದರ್ಯವನ್ನು ನೋಡಿದ ಝಲೀಖ ಬೀವಿ ಯ ಅರಮನೆಯಲ್ಲಿದ್ದ ಸ್ತ್ರೀಯರು ನಿಬ್ಬೆರಗಾಗಿ ಕೈಯನ್ನೇ ಕತ್ತರಿಸಿದರು. ಆ ಸೌಂದರ್ಯಕ್ಕೆ ಮನಸೋಲದ ಯಾವುದೇ ಸ್ತ್ರೀ ಅಂದು ಇರಲಿಲ್ಲ. ಇನ್ನು ಬಾಕಿಯಿರುವ ಅರ್ಧ ಸೌಂದರ್ಯವನ್ನು, ಅಂದರೆ ಲೋಕದಲ್ಲಿರುವ ಎಲ್ಲರಿಗೂ ಮತ್ತು ಯೂಸುಫ್ ನಬಿ (ಅ) ರಿಗೆ ನೀಡಿದ ಸೌಂದರ್ಯವನ್ನು ಅಲ್ಲಾಹು ಪ್ರವಾದಿ ﷺ ರಿಗೆ ನೀಡಿದ.
ಯಾರೂ ಕೂಡ ಪ್ರವಾದಿ ﷺ ರ ಸೌಂದರ್ಯವನ್ನು ನಗ್ನ ನೇತ್ರದಿಂದ ನೋಡಲಿಲ್ಲ. ಒಬ್ಬರು ಸ್ವಹಾಬಿ ಹೇಳುತ್ತಾರೆ, ಪ್ರವಾದಿ ﷺ ರ ಮೂಲ ಸೌಂದರ್ಯವನ್ನು ನಮ್ಮ ಬರೀ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಎಂದು. ಪ್ರವಾದಿ ﷺ ರ ಮುಖದ ಮತ್ತು ಆ ಮುಖವನ್ನು ನೋಡುವ ಕಣ್ಣುಗಳೆಡೆಯಲ್ಲಿ ಒಂದು ಪರದೆಯನ್ನು ಅಲ್ಲಾಹು ತಯಾರಿಸಿದ್ದಾನೆ.
ಕೆಲ ಮಹಾತ್ಮರು ಪ್ರವಾದಿ ﷺ ರ ಸೌಂದರ್ಯವನ್ನು ಚಂದ್ರನಿಗೆ ಹೋಲಿಸಿದರೆ ಮತ್ತು ಕೆಲವರು ಸೂರ್ಯನಿಗೆ ಹೋಲಿಸಿದ್ದಾರೆ. ಹಾಗಿರುವಾಗ ಸೂರ್ಯಕಿರಣಗಳನ್ನು ನಮ್ಮ ಕಣ್ಣಿಗೆ ನೋಡಲು ಸಾದ್ಯವಿಲ್ಲ ತಾನೇ...!!
ಪ್ರವಾದಿ ﷺ ರ ಮುಖ ಸದಾ ಸಮಯ ಮುಗುಳ್ನಗೆ ಮತ್ತು ಮಂದಹಾಸ ತುಂಬಿದ ಮುಖವಾಗಿತ್ತು. ಯಾರೂ ಕೂಡಾ ಪ್ರವಾದಿ ﷺ ರನ್ನು ನಗು ರಾಹಿತ್ಯವಾಗಿ ಕಾಣಲಿಲ್ಲ.
ಈ ಲೋಕದಲ್ಲಿ ಹಲವರು ಹಲವು ಕಾರಣಗಳಿಂದ ಜನರನ್ನು ಇಷ್ಟಪಡುತ್ತಾರೆ. ಕೆಲವರು ಸೌಂದರ್ಯ ನೋಡಿ ,ಮತ್ತು ಕೆಲವರು ಸಂಪತ್ತು ನೋಡಿ, ಮತ್ತು ಕೆಲವರು ಸ್ಥಾನಮಾನಗಳನ್ನು ನೋಡಿ ಇಷ್ಟಪಡುತ್ತಾರೆ. ಈ ಲೋಕದಲ್ಲಿರುವ ಎಲ್ಲರಿಗಿಂತಲೂ ನನ್ನನ್ನು ಪ್ರೀತಿಸುವ ತನಕ ಯಾರೂ ಕೂಡ ಪೂರ್ಣ ವಿಶ್ವಾಸಿಯಾಗುವುದಿಲ್ಲ ಎಂದು ಪ್ರವಾದಿ ﷺ ರು ಹೇಳಿದ್ದಾರೆ. ಮೇಲೆ ಹೇಳಿದ ಎಲ್ಲಾ ವಿಶೇಷತೆಗಳು ಪ್ರವಾದಿ ﷺ ರಿಗೆ ಇದೆ ಎಂಬುವುದಲ್ಲಿ ಸಂಶಯವಿಲ್ಲ. ಪ್ರವಾದಿ ﷺ ರನ್ನು ಪ್ರೀತಿಸೋಣ. ದ್ವಿಲೋಕ ವಿಜಯವನ್ನು ಪಡೆಯೋಣ.
Comments
Post a Comment